ಸರ್ ವಾಲ್ಟರ್ ಎಲಿಯಟ್ : -1803-87, ಭಾರತೀಯ ಸಂಸ್ಕೃತಿ ಶಾಸ್ತ್ರಜ್ಞನಾದ ಈತ ಪ್ರಾರಂಭದಲ್ಲಿ ಐ.ಸಿ.ಎಸ್. ಅಧಿಕಾರಿಯಾಗಿ ಭಾರತಕ್ಕೆ ಬಂದ (1821), ಚೆನ್ನೈ(ಮದರಾಸ್)ನ ಗವರ್ನರ್ ಲಾರ್ಡ್ ಎಲ್ಫಿನ್ಸ್ಟನ್ಗೆ ಕಾರ್ಯದರ್ಶಿಯಾಗಿ ಕೆಲಸಮಾಡಿದ. ಭಾರತದ ಪ್ರಾಚೀನ ಸಂಸ್ಕೃತಿಯ ಬಗ್ಗೆ ಅಮಿತವಾದ ಆಸಕ್ತಿ ಇತ್ತಾಗಿ ತನ್ನ ಕಚೇರಿಯ ಗುಮಾಸ್ತನ ಸಹಾಯದಿಂದ ಪ್ರಾಚೀನ ಲಿಪಿಗಳ ಅಧ್ಯಯನ ನಡೆಸಿ ಪುರಾತನ ಶಾಸನಗಳನ್ನು ಓದತೊಡಗಿದ. ಅನಂತರ ಭಾರತದ ಪ್ರಾಚೀನ ನಾಣ್ಯಗಳ ವಿಚಾರವಾಗಿ ಪರಿಶೋಧನೆ ಪ್ರಾರಂಭಿಸಿ, ಕಾಯಿನ್ಸ್‌ ಆಫ್ ಸೌತ್ ಇಂಡಿಯ ಇಂಬ ಗ್ರಂಥ ರಚಿಸಿದ. ಈ ಗ್ರಂಥ ಇಂಟರ್ನ್ಯಾಷನಲ್ ನ್ಯುಮಿಸ್ಮ್ಯಾಟಾ ಓರಿಯಂಟ್ಯಾಲಿಯ ಗ್ರಂಥದ ಒಂದು ಭಾಗವಾಗಿದೆ. 1877ರಲ್ಲಿ ರಾಯಲ್ ಏಷ್ಯಾಟಿಕ್ ಸೊಸ್ಶೆಟಿಯ ಫೆಲೊ ಆಗಿ ಚುನಾಯಿತನಾದ. ಇವನ ಪರಿಶೋಧನ ಲೇಖನಗಳನ್ನು ಇಂಡಿಯನ್ ಆಂಟಿಕ್ವರಿ, ಜರ್ನಲ್ ಆಫ್ ದಿ ರಾಯಲ್ ಏಷ್ಯಾಟಿಕ್ ಸೊಸೈಟಿ, ಜರ್ನಲ್ ಆಫ್ ದಿ ಎತ್ನಲಾಜಿಕಲ್ ಸೊಸೈಟಿ ಮುಂತಾದ ಪ್ರಕಟನೆಗಳಲ್ಲಿ ಕಾಣಬಹುದು.   (ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ